ಚೆಲ್ವಿ ಚೆಲ್ವಿ ಎಂದು
ಜಾನಪದ
ಚೆಲ್ವಿ ಚೆಲ್ವಿ ಎಂದು ಅತಿಯಾಸೆ ಪಡಬೇಡ
ಚೆಲುವಿದ್ದರೇನೂ ಗುಣವಿಲ್ಲ | ಕೊಳೆನೀರು
ತಿಳಿಯಿದ್ದರೇನೂ ರುಚಿಯಿಲ್ಲ ||
ಕಪ್ಪು ಹೆಂಡತಿ ಎಂದು ಕಳವಾಳ ಪಡಬೇಡ
ನೇರಾಳೆ ಹಣ್ಣು ಬಲು ಕಪ್ಪು | ಆದಾರು
ತಿಂದು ನೋಡಿದರೆ ರುಚಿ ಬಹಳ ||
ಕೆಂಪು ಹೆಂಡತಿ ಎಂದು ಸಂತೋಷ ಪಡಬೇಡ
ಅತ್ತಿಯ ಹಣ್ಣು ಬಲು ಕೆಂಪು | ಇದ್ದಾರು
ಹೊಡೆದು ನೊಡಿದರೆ ಹುಳು ಬಹಳ ||
ಬಂಗಾರದ ಬಳೆತೊಟ್ಟು ಬಡವಾರ ಬೈಬೇಡ
ಬಂಗಾರ ನಿನಗೇ ಸ್ಥಿರವಲ್ಲ | ಮಧ್ಯಾಹ್ನ
ಸಂಜೆಯಾಗುವುದೂ ತಡವಲ್ಲ ||